ರತ್ನಾಕರ
9ನೆಯ ಶತಮಾನದ ಸಂಸ್ಕøತ ಕವಿ. ಹರವಿಜಯ ಎಂಬ ಕಾವ್ಯದ ಕರ್ತೃ. ಕಾಶ್ಮೀರದ ರಾಜಾದಿತ್ಯ, ಅವಂತಿವರ್ಮ (858-84) ಅರಸರ ಆಶ್ರಯದಲ್ಲಿ ಈತ ಕಾವ್ಯರಚನೆ ಕೈಗೊಂಡ ಮಹಾಕವಿ ಎಂಬ ಖ್ಯಾತಿ ಗಳಿಸಿದ. ಅವಂತಿವರ್ಮನಿಗೆ ಬೃಹಸ್ಪತಿ, ವಿದ್ಯಾಪತಿ, ವಾಗೀಶ್ವರ ಎಂಬ ಬಿರುದುಗಳಿದ್ದುವು. ಅವನ ಆಶ್ರಯದಲ್ಲಿದ್ದುದರಿಂದ ರತ್ನಾಕರನಿಗೆ ಬೃಹಸ್ಪತ್ಯನುಜೀವಿ ಎಂಬ ಬಿರುದು ಲಭಿಸಿತ್ತು. ಇವನ ಹೆಸರಿನೊಡನೆ ವಂಶದ ಹೆಸರಾದ ರಾಜಾನಕ ಎಂಬ ಪದವೂ ಸೇರಿ ಈತ ರಾಜಾನಕ ರತ್ನಾಕರನೆಂದೂ ಪ್ರಸಿದ್ಧನಾಗಿದ್ದಾನೆ. ಇವನ ತಂದೆ ಅಮೃತಭಾನು. ಪ್ರಸಿದ್ಧ ಕಾವ್ಯಮೀಮಾಂಸಕರಾದ ಆನಂದವರ್ಧನ, ರಾಜಶೇಖರ ಇವರು ರತ್ನಾಕರನ ಸಮಕಾಲೀನರು.

ಹರವಿಜಯ 55 ಸರ್ಗಗಳನ್ನೊಳಗೊಂಡ, ಶಿವಪಾರಮ್ಯವನ್ನು ಸ್ಥಾಪಿಸಹೊರಟ ಪ್ರೌಢ ಮಹಾಕಾವ್ಯ. ಮಹಾಕಾವ್ಯ ಧೋರಣೆಯಂತೆ ಹದಿನೆಂಟು ವರ್ಣಗಳಿಂದ ಮೈದುಂಬಿಕೊಂಡಿದೆ. ಕವಿ ಉನ್ನತ ಪ್ರತಿಭಾವಂತನಾಗಿದ್ದರಿಂದ ಕಾವ್ಯ ಅತಿ ವಿಸ್ತಾರವಾಗಿದ್ದರೂ ರಮ್ಯವಾಗಿದೆ. ಈ ಕಾವ್ಯದ ವರ್ಣನಾ ವೈಖರಿಯನ್ನು ಗಮನಿಸಿದರೆ ಕವಿಗೆ ಮಾಘನ ನೈಷಧಕಾವ್ಯವನ್ನು ಮೀರಿಸುವ ಹುರುಡು ಮನಸ್ಸಿನಲ್ಲಿತ್ತೆಂಬ ಭಾವನೆಯುಂಟಾಗುತ್ತದೆ.

ಹರವಿಜಯಕ್ಕೆ ರಾಜಾನಕ ಜಯಾನಕನ ಮಗ ಅಲಕ ಒಂದು ವ್ಯಾಖ್ಯಾನ ರಚಿಸಿದ್ದಾನೆ. ಇದು ಅಪೂರ್ಣವಾಗಿದ್ದು ಕಾವ್ಯದ 46 ನೆಯ ಸರ್ಗದ ಮಧ್ಯದಲ್ಲಿ ಪರಿಸಮಾಪ್ತಿಗೊಂಡಿದೆ. ಈ ಅಲಕ ರತ್ನಾಕರನ ಶಿಷ್ಯನಾಗಿದ್ದವನು. ಇವನ ಅಪೂರ್ಣ ವ್ಯಾಖ್ಯಾನವನ್ನು ಗಣಪತಿ ಎಂಬಾತ ಪೂರ್ಣಗೊಳಿಸಿದ್ದಾನೆ. ವಲ್ಲಭ ದೇವನೆಂಬ ಮತ್ತೊಬ್ಬ ಕವಿ ಈ ಕಾವ್ಯಕ್ಕೆ ಸಂಪೂರ್ಣ ವ್ಯಾಖ್ಯಾನ ಬರೆದಿದ್ದಾನೆ.

	ಅಲಂಕಾರಶಾಸ್ತ್ರಕ್ಕೂ ಅದರ ಸ್ವರ್ಣ ಶಿಖರವಾದ ಧ್ವನಿ ಸಿದ್ಧಾಂತಕ್ಕೂ ಕಾಶ್ಮೀರ ತವರೂರು. ಆನಂದವರ್ಧನನ ಸಮಕಾಲೀನನಾಗಿ ರತ್ನಾಕರನು ಕಾವ್ಯದ ಮುಖಾಂಗಗಳಾದ ವಕ್ರೋಕ್ತಿ ಮತ್ತು ಧ್ವನಿ ವಿಷಯವಾಗಿ ವಕ್ರೋಕ್ತಿ ಪಂಚಶಿಖಾ, ಧ್ವನಿ ಗಾಥಾ ಪ್ರಕಾಶಿಕಾ ಎಂಬ ಎರಡು ಕೃತಿಗಳನ್ನು ರಚಿಸಿದ್ದಾನೆ. ವಕ್ರೋಕ್ತಿ ಪಂಚಶಿಖಾ, ಶಿವ ಪಾರ್ವತಿಯರ ಕಲ್ಪಿತ ಸಂವಾದ ರೂಪವಾಗಿರುವ 30 ಶ್ಲೋಕಗಳನ್ನು ಒಳಗೊಂಡ ಪುಟ್ಟಕಾವ್ಯ. ಧ್ವನಿ ವಿಷಯಕ ಪ್ರತಿಬಂಧವೇ ಧ್ವನಿಗಾಥಾ ಪ್ರಕಾಶಿಕಾ.
(ಜಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ